Wednesday, February 18, 2009

ನೀನು ಮತ್ತು ಪ್ರೇಮ

ಮೇಲೆದ್ದ ದಿನಕರ ಕೆಂದಾವರೆಯ ಚುಂಬಿಸಿ
ಮೋಡದಲಿ ಅಡಗಿದನು ತುಸು ವಿಶ್ರಾಂತಿ ಬಯಸಿ

ನಾಚಿ ನೀರಾಗಿ ಆ ತಾವರೆ ನಿನ್ನ ಮುಖ ಕಮಲ
ನಕ್ಕಾಗ ಅಲ್ಲೊಮ್ಮೆ ಚಂದ್ರೋದಯ

ಮನದ ಕೋಗಿಲೆಯ ಮದುರ ಕವನ
ಎಂದಾದರೊಂದು ದಿನ ಮುಟ್ಟೀತು ನಿನ್ನ ಮನ

ತನುವೆಲ್ಲ ತುಂಬಿದ್ದ , ಆ ನಗುವ ಸಿಂಚನ
ನೆನೆದಾಗ ಹುಟ್ಟಿಸುವ ಮಧುರ ಲಘು ಕಂಪನ

ತನುವೆಲ್ಲೋ ! ಮನವೆಲ್ಲೋ ! ಎನುವ ಮನ ದುಂಬಿಯದು
ತಾವರೆಯು ಒಂದೇ ಹೂವೆನ್ನುತಿಹುದು

ತಾರೆಗಳು ನಕ್ಕಂತೆ ಕಂಗಳಾ ನೋಟ
ಸೆರೆಹಿಡಿದಿತೇನೊ ಕುದುರೆ ನಾಗಾಲೋಟ

ದುಮ್ಮಿಕ್ಕೋ ಉತ್ಸಾಹ ಜೋಗದಾ ಚಿಲುಮೆಯದು
ಕಟ್ಟಿದರು ಬಿಟ್ಟೀತೆ ತನ್ನ ಚಲವನದು

ಕನಸು - ನನಸು

ಗೆಳತಿ
ತಂಗಾಳಿ ನಿನ್ನ ಮುಂಗುರುಳ ಚುಂಬಿಸಿ ಮತ್ತೆ
ಬಂದಂತೆ ಸನಿಹ!

ಸುಳಿ ಸುಳಿದು ಹೃದಯದಲಿ , ಹಾಡಾಗಿ ಹೊರ ಹೊಮ್ಮಿ
ಉತ್ಸಾಹದಲಿ ಪುಟಿಯುತಲಿದೆ ಈ ಮನವಿಂದು ನಗು ಚಿಮ್ಮಿ

ಕಲ್ಪನೆಯೂ ಗರಿ ಬಿಚ್ಚಿ, ಹಾರುತಿದೆ ಮನದ ಹಕ್ಕಿ.
ನಿನ್ನ ಸ್ಪರ್ಶದ, ಆ ಹರ್ಷದ ನಗು ಮುಖದ ನೆನಪಿನಲಿ!!!

ಪ್ರಿಯಸಖಿ
ಹೂವಾಗಿ ಅರಳಿ ಕಂಪನ್ನು ಇತ್ತಿದ್ದೆ ನನ್ನ ಜೀವನಕೆ ನೀ ಪ್ರಿಯ ಸಖಿ
ಹೊಂಬಣ್ಣದ ಹೂವೊಳಗೆ ಮಕರಂದ ತುಂಬಿದ್ದೆ
ನನ್ನ ಜೀವನಕೆ ಹೊಸ ಆಯಾಮ ನೀಡಿದ್ದೆ

ಕನಸಲ್ಲೂ ಕಾಡಿದ್ದೆ
ನನಸಲ್ಲಿ ನಗುತಿದ್ದೆ
ನಿನ್ನ ಜೊತೆಯಿರಲು ನಾ ಚಡಪಡಿಸಿದ್ದೆ

ನೆನಹುಗಳು ಕಾಡಿತ್ತು
ಕಲ್ಪನೆ ಗರಿಗೆದರಿತ್ತು
ಮನದಲ್ಲಿ ನೋವಿತ್ತು
ಏನೋ ಕಳೆದು ಕೊಂಡತಿತ್ತು

ಆ ನಿನ್ನ ಪ್ರತಿ ಸ್ಪರ್ಶ
ಕುಲು ಕುಲು ನಗುವಿನಲ್ಲಿಯ ಹರ್ಷ
ನೆನಪಾಗಿ ಕಾಡುವದು
ನನ್ನನ್ನು ಹಗಲಿರುಳು

ಕಣ್ಣಾಲಿ ತುಂಬಿದ್ದು
ನಾನಿನ್ನ ಬಯಸಿದ್ದು
ಬರಿ ಒಂದು ಕನಸೀನೋ ಎಂದು ಕನವರಿಸಿದ್ದು

ಮನಸೀಗ ತಿಳಿನೀರು
ಆಗಸದಲಿ ಚಂದ್ರಮ
ನನ್ನಲ್ಲಿ ನಿನ್ನ ಪ್ರತಿಬಿಂಬ

ಅನಂತಾನಂತ ಧನ್ಯವಾದಗಳು

ತಮ್ಮ ತುಂಬು ಹೃದಯದ ಪ್ರೋತ್ಸಾಹಕ್ಕೆ ಧನ್ಯವಾದ ಅಂತ ಹೇಳಿದರೆ, ಬಹುಶಹ ಅದು ಧನ್ಯವಾದ ಹೇಳಿದಂತೆ ಆಗುವುದೇ ಇಲ್ಲವೇನೋ ಎಂದೆನಿಸಿದೆ.

ಸಂಗೀತ ಸಾಹಿತ್ಯ ಕಲೆ ಇವುಗಳಲ್ಲಿ ಒಂದನ್ನು ಕೂಡಾ ಆರಧಿಸದೆ ಇರುವವನು ಮನುಷ್ಯನೇ ಅಲ್ಲ ಅಂತ ಹೇಳುತ್ತದೆ, ಸಂಸೃತ ಸಾಹಿತ್ಯ.

ಅದೇ ರೀತಿ, ಉತ್ತಮವಾದ ಕಾವ್ಯ ರಸಿಕರ ಮನ ತಣಿಸುವ ಕವನ, ಕಾವ್ಯ ರಚನೆ ಸಮಾಜದ ಒಳಿತನ್ನು ಕಾಪಾಡುತ್ತದೆ, ಕಾಪಿದುತ್ತದೆ, ಅದು ಸಮಾಜ ಸೇವೆ ಅನ್ನುತ್ತಾರೆ ನಮ್ಮ ಕನ್ನಡ ದಿಗ್ಗಜರು

ಅಂತೆಯೇ, ತಮ್ಮ ಮಡಿಲಿಗೆ ಮತ್ತಷ್ಟು ಪುಟ್ಟ ಕವನಗಳನ್ನು ಹಾಕುತ್ತ ಇದ್ದೇನೆ
ಓದಿ , ವಿಮರ್ಶಿಸಿ , ತಮ್ಮ ಅಭಿಪ್ರಾಯ ತಿಳಿಸಿ .
ಸಾಹಿತ್ಯ ರಂಗದಲ್ಲಿ ನನ್ನನ್ನು ಇನ್ನಷ್ಟು ಮುಂದಕ್ಕೆ ನಡೆಸಿ.

ಬನ್ನಿ, ನಾವೆಲ್ಲ ಸೇರಿ ಒಂದಷ್ಟು ಒಳ್ಳೆಯ ಸಾಹಿತ್ಯ, ಕವನವನ್ನು ನಮ್ಮ ಕನ್ನಡಕ್ಕೆ ಕೊಡುವ ಪ್ರಯತ್ನ , ಅಳಿಲು ಸೇವೆ ಮಾಡೋಣ.